ಮುಕ್ತಾಯ ಮಾಡು

    ಇತಿಹಾಸ

    ನಗರ ಸಿವಿಲ್ ನ್ಯಾಯಾಲಯದ ಸಂಕ್ಷಿಪ್ತ ಪರಿಚಯ

    ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯವು 19.11.1980ರಂದು ಸ್ಧಾಪನೆಗೊಂಡಿದ್ದು, ಅಂದಿನ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ಶ್ರೀ ವೈ.ವಿ. ಚಂದ್ರಚೂಡರವರಿಂದ ಉದ್ಘಾಟನೆಗೊಂಡಿದ್ದು, ಅಂದಿನ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ಶ್ರೀಯುತ ಎಂ.ಎನ್.ವೆಂಕಟಾಚಲಯ್ಯ ಹಾಗೂ ಅಂದಿನ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಗೌರವಾನ್ವಿತ ಆರ್. ಗುಂಡೂರಾಯರ ಉಪಸ್ಧಿತಿಯಲ್ಲಿ ಆರಂಭಗೊಂಡಿತ್ತು.

    ಈ ಹಿಂದೆ ಬೆಂಗಳೂರು ನಗರದಲ್ಲಿ, ಬೇರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಂತೆ, ಮುನ್ಸೀಫ್ ನ್ಯಾಯಾಲಯ, ಹಿರಿಯ ಸಿವಿಲ್‍ ನ್ಯಾಯಾಧೀಶರ ನ್ಯಾಯಾಲಯ ಮತ್ತು ಜಿಲ್ಲಾ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿದ್ದವು, ಬೆಳೆಯುತ್ತಿರುವ ಬೆಂಗಳೂರಿನ ಬೆಳವಣಿಗೆಯನ್ನು ಮತ್ತು ದಾಖಲಾಗುತ್ತಿದ್ದ ಮೊಕದ್ದಮೆಗಳ ಏರುಗತಿಯನ್ನು ಅರಿತು ಮತ್ತು ಆಗ ಕಾರ್ಯನಿರ್ವಹಿಸುತ್ತಿದ್ದ ನ್ಯಾಯಾಲಯಗಳಿಂದ ನಿರೀಕ್ಷಿತ ಉದ್ದೇಶ ಸಾಧ್ಯವಿಲ್ಲವೆಂದು ಮನಗಂಡು, ಅಲ್ಲದೇ ನ್ಯಾಯಾಲಯಗಳ ತೀರ್ಪಿಗೆ ಮೇಲ್ಮನವಿಗಳನ್ನು, ವಿವಿಧ ಸ್ತರದ ಉನ್ನತ ನ್ಯಾಯಾಲಯಗಳಿಗೆ ಸಲ್ಲಿಸಬೇಕಾದ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ, ಮೇಲಸ್ತರದ ನ್ಯಾಯಾಧೀಶರು ಕಾರ್ಯನಿರ್ವಹಿಸುವ ಮತ್ತು ಅವರುಗಳಿಂದ ಬರುವ ತೀರ್ಪು ಗುಣಮಟ್ಟದಿಂದ ಕೂಡಿರಬೇಕು, ಕಕ್ಷಿದಾರರು ಅವುಗಳಿಂದ ತೃಪ್ತರಾಗಬೇಕೆಂಬ ಸದುದ್ದೇಶದಿಂದ, ಮತ್ತು ಸಲ್ಲಿಸಲಾಗುವ ಮೇಲ್ಮನವಿಗಳ ಸಂಖ್ಯೆ ಇದರಿಂದ ಕಡಿಮೆಯಾಗಬಹುದೆಂಬ ಉದ್ದೇಶದಿಂದ, ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯ, ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದ ಬಾಂಬೆ, ಹಾಗೂ ಅಹಮದಾಬಾದ್‍ನ ನಗರ ಸಿವಿಲ್ ನ್ಯಾಯಾಲಯಗಳನ್ನು ಸಂದರ್ಶಿಸಿ, ಅವುಗಳ ಕಾರ್ಯನಿರ್ವಹಣೆಯ ಬಗ್ಗೆ ಅಧ್ಯಯನ ಕೈಗೊಂಡು, ವಿವರವಾದ ವರದಿಯನ್ನು ನೀಡಲು ಉನ್ನತ ಮಟ್ಟದ ನ್ಯಾಯಾಂಗ ಅಧಿಕಾರಿಗಳನ್ನು ಆ ನಗರಗಳಿಗೆ ನಿಯೋಜನೆ ಮಾಡಿ, ಅವರು ನೀಡಿದ ವರದಿಗಳನ್ನು ಆಧರಿಸಿ, ವ್ಯವಸ್ಥೆಯ ಅಳವಡಿಕೆಯ ಸಾಧಕ ಭಾದಕಗಳನ್ನು ಚರ್ಚಿಸಿ, ವಿಮರ್ಶಿಸಿ, ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದ ಸ್ಧಾಪನೆಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು.

    ಅದರಂತೆ, ಕರ್ನಾಟಕ ರಾಜ್ಯ ಸರ್ಕಾರ ನಗರ ಸಿವಿಲ್ ನ್ಯಾಯಾಲಯ ಕಾಯ್ದೆ, 1979ನ್ನು ಜಾರಿಗೊಳಿಸಿದ್ದು, ಸದರಿ ಆದೇಶ ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ 17ನೇ ಏಪ್ರಿಲ್ 1980ರಂದು ಪ್ರಕಟಗೊಂಡು, ಸರ್ಕಾರದ ಅಧಿಸೂಚನೆ ಸಂಖ್ಯೆ ಲಾ-263 ಎಲ್‍ಸಿಇ ದಿನಾಂಕ 05.11.1980ರಂತೆ ನಗರ ಸಿವಿಲ್‍ ನ್ಯಾಯಾಲಯ ಸ್ಧಾಪನೆಗೊಂಡು, ದಿನಾಂಕ 17.11.1980ರಿಂದ ಶುಭ ಕಾರ್ಯರಂಭ ಮಾಡಿತ್ತು. ಶ್ರೀಯುತ ಪಿ.ಎ. ಕುಲಕರ್ಣಿ ಹಿರಿಯ ಜಿಲ್ಲಾ ನ್ಯಾಯಾಧೀಶರನ್ನು, ಪ್ರಥಮ ಪ್ರಧಾನ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿತ್ತು, ಶ್ರೀಯುತರು ಮುಂದೆ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು.

    ಕಾರ್ಯಾರಂಭದ ಪ್ರಾರಂಭದಲ್ಲಿ, ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ವರ್ಗಗಳ ಮೊಕದ್ದಮೆಗಳ ಸಂಖ್ಯೆ 31,772. ಆರಂಭದಲ್ಲಿ ಹಿರಿಯ ಶ್ರೇಣಿಯ ಜಿಲ್ಲಾ ನ್ಯಾಯಾಧೀಶರನ್ನು ಪ್ರಧಾನ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರನ್ನಾಗಿಯೂ ಜೊತೆಗೆ ಉಳಿದ 18 ಅಪರ ಜಿಲ್ಲಾ ನ್ಯಾಯಾಧೀಶರನ್ನು ನೇಮಕ ಮಾಡಲಾಗಿದ್ದು, ಅಂದು ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳ ಸಂಖ್ಯೆ ಕೇವಲ 391. ತದನಂತರದ ಬೆಳವಣಿಗೆಯಲ್ಲಿ ಮೊಕದ್ದಮೆಗಳ ದಾಖಲಾತಿಯಲ್ಲಾದ ಏರಿಕೆಗೆ ಅನುಗುಣವಾಗಿ, ಕಾಲ ಕಾಲಕ್ಕೆ ಹೆಚ್ಚುವರಿ ನಗರ ಸಿವಿಲ್ ನ್ಯಾಯಾಲಯಗಳನ್ನು ಸ್ಧಾಪಿಸಿ, ನ್ಯಾಯಾಲಯಗಳ ಸಂಖ್ಯೆಗೆ ಅನುಗುಣವಾಗಿ ವಿವಿಧ ಶ್ರೇಣಿಯ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ಹಾಲಿ ನಗರ ಸಿವಿಲ್ ನ್ಯಾಯಾಲಯ ಬೆಂಗಳೂರಿನಲ್ಲಿ, ಪ್ರಧಾನ ನಗರ ಸಿವಿಲ್ ನ್ಯಾಯಾಧೀಶರನ್ನು ಒಳಗೊಂಡಂತೆ, ಒಟ್ಟು 95 ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ.

    ಮುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯಗಳ ಸಂಕ್ಷಿಪ್ತ ಪರಿಚಯ

    ದಿನಾಂಕ 07.04.1970 ರಂದು ಅಂದಿನ ಮೈಸೂರು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಗೌರವಾನ್ವಿತ ಎಂ. ಸದಾಶಿವಯ್ಯ ಹಾಗೂ ಅಂದಿನ ಮೈಸೂರು ಸರ್ಕಾರದ ಕಾನೂನು ಸಚಿವರ ಸಮ್ಮುಖದಲ್ಲಿ ಬೆಂಗಳೂರು ನಗರದ ನೃಪತುಂಗ ರಸ್ತೆಯ ಮುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯದ ಮುಖ್ಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿರುತ್ತಾರೆ. ದಿನಾಂಕಃ 09.03.1977ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ಅಂದಿನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಕೆ. ಭೀಮಯ್ಯರವರ ಸಮ್ಮುಖದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಅಂದಿನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಸಿ. ಹೊನ್ನಯ್ಯರವರು ಮುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯದ ಕಟ್ಟಡವನ್ನು ಉದ್ಫಾಟನೆ ಮಾಡಿರುತ್ತಾರೆ.

    ಮುುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯಗಳ ಸಂಕೀರ್ಣದ ಪೂರ್ವ ದಿಕ್ಕಿಗೆ ಇರುವ ಪೂರಕ ಕಟ್ಟಡದ ಶಂಕುಸ್ಥಾಪನಾ ಸಮಾರಂಭವು ದಿನಾಂಕಃ 06.10.2005 ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಕೆ. ರಾಮಣ್ಣರವರ ಉಪಸ್ಥಿತಿಯಲ್ಲಿ ಗೌರವಾನ್ವಿತ ನ್ಯಾಯಮೂರ್ತಿ ಎಸ್.ಆರ್. ನಾಯಕ್ ರವರಿಂದ ನೆರವೇರಿಸಲ್ಪಟ್ಟಿತ್ತು. ಸದರಿ ಕಟ್ಟಡವು ಪೂರ್ಣಗೊಂಡ ನಂತರ ದಿನಾಂಕಃ 29.10.2007 ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ಅಂದಿನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ರವಿ ಬಿ. ನಾಯಕ್‍, ಶ್ರೀ ಸುಭಾಷ್‍ ಬಿ. ಆದಿ, ಇವರುಗಳ ಘನ ಉಪಸ್ಥಿತಿಯಲ್ಲಿ ಅಂದಿನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಶ್ರೀ ಸಿರಿಯಾಕ್‍ ಜೋಸೆಫ್‍ರವರಿಂದ ಉದ್ಫಾಟನೆಗೊಂಡಿರುತ್ತದೆ.

    ಮುುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯದ ಸಂಕೀರ್ಣದ ಹೆಚ್ಚುವರಿ ಪೂರಕ ಕಟ್ಟಡದ ಉದ್ಛಾಟನಾ ಸಮಾರಂಭ ಹಾಗೂ 2ನೇ ಹಂತದ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭವು ದಿನಾಂಕಃ 09.09.2019ರಂದು ಭಾರತದ ಸರ್ವೋಚ್ಚ ನ್ಯಾಯಾಲಯದ ಅಂದಿನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಮೋಹನ ಎಂ. ಶಾಂತನಗೌಡರ್, ಶ್ರೀ ಎಸ್‍. ಅಬ್ದುಲ್‍ ನಜೀರ್, ಶ್ರೀ ಎ.ಎಸ್. ಬೋಪಣ್ಣರವರಿಂದ ನೆರವೇರಿಸಲ್ಪಟ್ಟಿತ್ತು. ಸದರಿ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಅಂದಿನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀ ಅಭಯ್‍ ಶ್ರೀನಿವಾಸ್‍ ಓಕಾ ಮತ್ತು ನ್ಯಾಯಮೂರ್ತಿಗಳಾದ ಶ್ರೀ ಅರವಿಂದ್‍ ಕುಮಾರ್ ಇವರುಗಳು ಭಾಗವಹಿಸಿದ್ದರು.

    ಮುಖ್ಯ ಕಟ್ಟಡದಲ್ಲಿ ಪ್ರಸ್ತುತ ಮುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯ, 1 ರಿಂದ 9ನೇ ಹೆಚ್ಚುವರಿ ನ್ಯಾಯಾಲಯಗಳು ಹಾಗೂ 24, 30, 31ನೇ ಹೆಚ್ಚುವರಿ ನ್ಯಾಯಾಲಯಗಳು ಹಾಗೂ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ, ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಅದರ 1 ಮತ್ತು 2ನೇ ಅಪರ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಗಳು ಸೇರಿದಂತೆ ಒಟ್ಟಾರೆ 17 ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ.

    ಪೂರಕ ಕಟ್ಟಡದಲ್ಲಿ ಪ್ರಸ್ತುತ 2 ರಿಂದ 6ನೇ ಎಂಎಂಟಿಸಿ ನ್ಯಾಯಾಲಯಗಳು ಹಾಗೂ 12, 13, 15, 16, 18, 19, 20, 21, 22, 23, 25, 26, 27, 28, 32 ಅಪರ ಮುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯಗಳು ಸೇರಿದಂತೆ 20 ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ.

    ಹೆಚ್ಚುವರಿ ಪೂರಕ ಕಟ್ಟಡದಲ್ಲಿ ಪ್ರಸ್ತುತ 36 ರಿಂದ 41ನೇ ಅಪರ ಮುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯಗಳು ಹಾಗೂ 45 ಮತ್ತು 46ನೇ ಅಪರ ಮುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯಗಳು ಮತ್ತು ವರ್ಚ್ಯುವಲ್‍ ನ್ಯಾಯಾಲಯ ಒಟ್ಟಾರೆ 09 ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ.

    ಮುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯಗಳ ಸಂಕೀರ್ಣದಲ್ಲಿ ಮುಖ್ಯ ಕಟ್ಟಡ, ಪೂರಕ ಕಟ್ಟಡ ಮತ್ತು ಹೆಚ್ಚುವರಿ ಪೂರಕ ಕಟ್ಟಡಗಳಲ್ಲಿ ಮುಖ್ಯ ಮಹಾನಗರ ದಂಡಾಧಿಕಾರಿಗಳನ್ನು ಒಳಗೊಂಡಂತೆ ಒಟ್ಟಾರೆ 46 ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ ಹಾಗೂ ಉಪ ವಿಲೇಖನಾಧಿಕಾರಿಗಳಾಗಿ ಸಿವಿಲ್‍ ನ್ಯಾಯಾಧೀಶರು ಕಾರ್ಯ ನಿರ್ವಹಿಸುತ್ತಿದ್ದಾರೆ.

    ಮುಂದುವರೆದು 10, 11, 14, 29, 33, 34ನೇ ಅಪರ ಮುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯಗಳು ಹಾಗೂ 1ನೇ ಎಂಎಂಟಿಸಿ ನ್ಯಾಯಾಲಯ ಮೆಯೋಹಾಲ್‍ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿವೆ. 17ನೇ ಮತ್ತು 42ನೇ ಅಪರ ಮುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯಗಳು ನಗರ ಸಿವಿಲ್‍ ನ್ಯಾಯಾಲಯದ ಸಮುಚ್ಚಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. 35ನೇ ಅಪರ ಮುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯವು ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೇ ನಿಲ್ದಾಣದ ಸಂಕೀರ್ಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಹಾಗೂ ಮಾರಾಟ ತೆರಿಗೆ ನ್ಯಾಯಾಲಯವು ಬೆಂಗಳೂರಿನ ಗಾಂಧಿನಗರದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

    ವಾಣಿಜ್ಯ ವ್ಯವಹಾರದ ನ್ಯಾಯಲಯಗಳ ಬಗ್ಗೆ ಸಂಕ್ಷಿಪ್ತ ಪರಿಚಯ

    ಆರಂಭದಲ್ಲಿ ವಾಣಿಜ್ಯ ವ್ಯವಹಾರಗಳ ಮೊಕದ್ದಮೆಗಳಿಗಾಗಿ 2 ಹೆಚ್ಚುವರಿ ನಗರ ಸಿವಿಲ್ ನ್ಯಾಯಾಲಯಗಳನ್ನು (ನ್ಯಾಯಾಂಗಣ-83,84) ಮೀಸಲಾಗಿ ಇಟ್ಟಿದ್ದು, ಆ ನ್ಯಾಯಾಲಯಗಳು ಸರ್ಕಾರದ ಆಧಿಸೂಚನೆ ಲಾ-35 ಎಲ್‍ಸಿಇ-2018, ದಿನಾಂಕ 31.07.2018ರ ರೀತ್ಯ ಕಾರ್ಯರಂಭಗೊಂಡಿರುತ್ತವೆ. ಮುಂದೆ, ದಿನಾಂಕ 28.12.2020ರಲ್ಲಿ 6 ಹೆಚ್ಚುವರಿ ನಗರ ಸಿವಿಲ್ ನ್ಯಾಯಲಯಗಳನ್ನು ಸೃಜಿಸಲಾಗಿದ್ದು (ನ್ಯಾಯಾಂಗಣ-85,86,87,88,89 ಮತ್ತು 90) ಸರ್ಕಾರದ ಅಧಿಸೂಚನೆ ಸಂಖ್ಯೆಃ ಲಾ-73 ಎಲ್‍ಸಿಇ-2019ರಂತೆ, ದಿನಾಂಕ 02.11.2020ರಿಂದ ನಗರ ಸಿವಿಲ್ ನ್ಯಾಯಾಲಯದ ಕಟ್ಟಡದಲ್ಲೇ ಕಾರ್ಯಾರಂಭಿಸಿದವು.

    ದಿನಾಂಕ 07.02.2021ರಂದು ಬೆಂಗಳೂರಿನ ರಾಜಭವನ ರಸ್ತೆಯ ಬಿಎಸ್‍ಎನ್‍ಎಲ್ ಕಟ್ಟಡದಲ್ಲಿ ನೂತನ ವಾಣಿಜ್ಯ ವ್ಯವಹಾರಗಳ ನ್ಯಾಯಾಲಯದ ಸಮುಚ್ಚಯವನ್ನು ಭಾರತದ ಸರ್ವೋಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀಯುತ ಅಬ್ದುಲ್ ನಜೀರ್ ಮತ್ತು ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀಯುತ ಎ.ಜೆ. ಭೋಪಣ್ಣ ‍ರವರಿಂದ ಉದ್ಘಾಟಿಸಿದ್ದು, ಸದರಿ ಸಮಾರಂಭವು ಅಂದಿನ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ಶ್ರೀಯುತ ಅಭಯ್ ಶ್ರೀನಿವಾಸ್‍ ಓಕಾ, ಬೆಂಗಳೂರು ನಗರ ಆಡಳಿತಾತ್ಮಾಕ ನ್ಯಾಯಮೂರ್ತಿ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿದ್ದ ಗೌರವಾನ್ವಿತ ಶ್ರೀಮತಿ ನಾಗರತ್ನ ರವರ ಘನ ಉಪಸ್ಧಿತಿಯಲ್ಲಿ ನೆರವೇರಿತ್ತು ಮತ್ತು ಬೆಂಗಳುಾರು ನಗರ ಸಿವಿಲ್ ನ್ಯಾಯಾಲಯದ ಅಧಿಸೂಚನೆ ಸಂಖ್ಯೆಃ ಎಫ್ ನಂ ಎಡಿಎಂ-II 5/20 ದಿನಾಂಕ 12.02.2021ರ ಆದೇಶದಂತೆ ಎಲ್ಲಾ 8 ವಾಣಿಜ್ಯ ವ್ಯವಹಾರದ ನ್ಯಾಯಲಯಗಳನ್ನು ಬೆಂಗಳುಾರು ನಗರ ಸಿವಿಲ್ ನ್ಯಾಯಾಲಯದ ಕಟ್ಟಡದಿಂದ ರಾಜಭವನ ರಸ್ತೆಯಲ್ಲಿನ ಬಿಎಸ್‍ಎನ್‍ಎಲ್ ಕಟ್ಟಡದ 2 ಮತ್ತು 3 ನೇ ಅಂತಸ್ತಿಗೆ ವರ್ಗಾಯಿಸಲಾಯಿತು.

    ಮೆಯೋಹಾಲ್ ನ್ಯಾಯಾಲಯದ ಸಂಕ್ಷಿಪ್ತ ಪರಿಚಯ

    ಭಾರತದ ನಾಲ್ಕನೇ ವೈಸ್‍ರಾಯ್ ಅಗಿ ಕಾರ್ಯನಿರ್ವಹಿಸಿದ್ದ, ಲಾರ್ಡ ಮೆಯೋ (ಕ್ರಿಸ್ಟಿನಾಡ್‍ ರಿಚರ್ಡ್‍ಸೌತ್‍ವೆಲ್) ರವರ ಸ್ಮರಣಾರ್ಥ ನಿರ್ಮಿಸಲಾದ ಕಟ್ಟಡ ಮೆಯೋಹಾಲ್. ಗೌರವಾನ್ವಿತರು ಭಾರತದ ವೈಸ್‍ರಾಯ್ ಹಾಗೂ ಭಾರತದ ಮುಖ್ಯ ರಾಜ್ಯಪಾಲ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದವರು. ಅವರ ಗೌರವ ಸ್ಮರಣಾರ್ಥ ಸುಂದರ ಹೂತೋಟ, ಗಿಡ ಮರಗಳಿಂದ ಕಂಗೊಳಿಸುವ, ಸುಂದರ ಮೇಲ್ಛಾವಣಿಯಿಂದ ಅಲಂಕೃತವಾದ 2 ಅಂತಸ್ತಿನ ಕಟ್ಟಡವನ್ನು, ಆಗಿನ ಕಾಲದಲ್ಲಿ ಸಾರ್ವಜನಿಕ ದೇಣಿಗೆಯಿಂದ ಸಂಗ್ರಹಿಸಲಾದ ಸುಮಾರು ರೂ.45,000/- ವೆಚ್ಚದಲ್ಲಿ ನಿರ್ಮಿಸಲಾಗಿತ್ತು.

    ಮೆಯೋಹಾಲ್ ಕಟ್ಟಡವನ್ನು, ಬ್ರಿಟನ್ ಪ್ರಜೆಗಳಿಂದ ದಿನಾಂಕ 06.06.1893ರಲ್ಲಿ ಉದ್ಘಾಟಿಸಲಾಗಿತ್ತು. ಅಂದಿನ ರಾಜ್ಯಪತ್ರದಲ್ಲಿ ವಿವರಿಸಿದಂತೆ, ಕಟ್ಟಡದ ಮೇಲ್ನೋಟ ಅತ್ಯಂತ ಸುಂದರವಾಗಿದ್ದು, ಕಟ್ಟಡದ ವಾಸ್ತುಶಿಲ್ಪ ಅತ್ಯಂತ ಗಮನಾರ್ಹವಾಗಿದ್ದು, ಸುಂದರ ಕೆತ್ತನೆಗಳಿಂದ ಕೂಡಿದ್ದ, ಕಿಟಕಿ, ಬಾಗಿಲು, ಕಮಾನುಗಳು, ಚಿತ್ತಾಕರ್ಷಕವಾಗಿದ್ದು ಮರದ ನೆಲಹಾಸು ಗ್ರೀಕ್ ರೋಮನ್ ಶೈಲಿಯ ವಾಸ್ತುಶಿಲ್ಪ ಎಲ್ಲರು ಮೆಚ್ಚುವಂತಿತ್ತು. ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಕಟ್ಟಡ, ಗಾಳಿ ಬೆಳಕುಗಳಿಂದ ಸಮೃದ್ಧತೆಯಿಂದ ಕೂಡಿದ್ದು ಮನಮೋಹಕವಾಗಿತ್ತು. ಇಂತಹ ಮೇಯೋಹಾಲ್ ನ ಪಾರಂಪರಿಕ ಕಟ್ಟಡದಲ್ಲಿ, ಬೆಂಗಳುಾರು ನಗರ ಸಿವಿಲ್ ನ್ಯಾಯಾಲಯದ 8 ಹೆಚ್ಚುವರಿ ನಗರ ಸಿವಿಲ್ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ (ನ್ಯಾಯಾಂಗಣ-20,21,22,29,58,73,74,75ನೇ), ಅಲ್ಲದೇ 6 ಹೆಚ್ಚುವರಿ ಮುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯಗಳು (10,11,14,29,33,34ನೇ), ಜೊತೆಗೆ 3 ಹೆಚ್ಚುವರಿ ಲಘು ವ್ಯವಹಾರಗಳ ನ್ಯಾಯಾಲಯಗಳು (5,15 ಮತ್ತು 17ನೇ) ಮತ್ತು ಒಂದು 1ನೇ-ಎಂ.ಎಂ.ಟಿ.ಸಿ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ.

    ಕೌಟುಂಬಿಕ/ಕಾರ್ಮಿಕ/ಔದ್ಯಮಿಕ ನ್ಯಾಯಾಲಯದ ಸಂಕ್ಷಿಪ್ತ ಪರಿಚಯ

    1984ರಲ್ಲಿ ಕೌಟುಂಬಿಕ ನ್ಯಾಯಾಲಯದ ಕಾಯ್ದೆಯನ್ನು ಜಾರಿಗೊಳಿಸಿದ್ದು, ಸೆಪ್ಟೆಂಬರ್ 14, 1984 ರಿಂದ ಕಾರ್ಯರೂಪಗೊಂಡಿದೆ. ಕೌಟುಂಬಿಕ ನ್ಯಾಯಾಲಯಗಳ ಸ್ಧಾಪನೆಯ ಮುಖ್ಯ ಉದ್ದೇಶ ಹೆಚ್ಚುತ್ತಿದ್ದ ಕೌಟುಂಬಿಕ ವ್ಯಾಜ್ಯಗಳಿಗೆ, ಸದಾ ಗಿಜಿಗುಡುವ ವಾತಾವರಣದ ಬೇರೆ ಬೇರೆ ನ್ಯಾಯಾಲಯಗಳ ಜನಸಂದಣಿಯ ಮಧ್ಯೆ ಸಮಂಜಸ ಪರಿಹಾರ ನಿಲುಕದೇನೋ ಎಂಬ ಅನುಮಾನದಿಂದ, ಕೌಟುಂಬಿಕ ಸಮಸ್ಯೆಗಳ ಇತ್ಯರ್ಥಕ್ಕಾಗಿ ಪೂರಕ ವಾತಾವರಣವಿರುವ, ಅಂತಃಕರಣದಿಂದ ಕೂಡಿದ, ಸಂಧಾನ ಅನುಕೂಲ ವಾತಾವರಣದ, ಕೌಟುಂಬಿಕ ವ್ಯಾಜ್ಯದ ಪಕ್ಷಕಾರರು ಎದುರು ಬದುರುದಾರರು ಎಂಬ ಭಾವನೆ ರಹಿತ ವಾತಾವರಣ ನಿರ್ಮಾಣದ ಸದುದ್ದೇಶದಿಂದ ಸ್ಥಾಪಿಸಲಾಯಿತು.

    ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆಃ ಲಾ-167 ಎಲ್‍ಸಿಇ-83 ಬೆಂಗಳೂರು ದಿನಾಂಕ 21.05.1987ರ ರೀತ್ಯ ಕೌಟುಂಬಿಕ ನ್ಯಾಯಾಲಯಗಳು ನಗರ ಸಿವಿಲ್ ನ್ಯಾಯಾಲಯದ ಸಂಕೀರ್ಣದಲ್ಲಿ ಕಾರ್ಯಾರಂಭಗೊಂಡು, 2007ನೇ ಇಸವಿಯಲ್ಲಿ ಎಲ್ಲಾ ಕೌಟುಂಬಿಕ ನ್ಯಾಯಾಲಯಗಳನ್ನು ಬೆಂಗಳೂರಿನ ಹೆಚ್.ಸಿದ್ದಯ್ಯ ರಸ್ತೆಯಲ್ಲಿರುವ ನ್ಯಾಯದೇಗುಲ ಕಟ್ಟಡಕ್ಕೆ ಸ್ಧಳಾಂತರಿಸಲಾಗಿದ್ದು, ಹಾಲಿ ನ್ಯಾಯದೇಗುಲ ಕಟ್ಟಡದ 3ನೇ ಅಂತಸ್ತಿನಲ್ಲಿ 7 ಕೌಟುಂಬಿಕ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿದ್ದು 4ನೇ ಅಂತಸ್ತಿನಲ್ಲಿ ಮಕ್ಕಳಿಗಾಗಿ ವಿಶ್ರಾಂತಿ ಮತ್ತು ಮನರಂಜನೆಯ ಕೇಂದ್ರ ಸ್ಧಾಪಿಸಲಾಗಿದೆ.
    ಇದಲ್ಲದೇ, ನ್ಯಾಯದೇಗುಲದ ಕಟ್ಟಡದಲ್ಲೇ, 2 ಔದ್ಯಮಿಕ ನ್ಯಾಯಾಲಯಗಳಿದ್ದು, ಸಂವಿಧಾನದ ಅನುಚ್ಛೇದ 3ರಡಿಯಲ್ಲಿ, ಸದರಿ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಅನುಚ್ಛೇದ 2 1947ರಡಿಯಲ್ಲಿ ಸ್ಧಾಪಿತವಾಗಿರುವ, ಜಿಲ್ಲಾ ನ್ಯಾಯಾಧೀಶರು ಕಾರ್ಯನಿರ್ವಹಿಸುವ 4 ಕಾರ್ಮಿಕ ನ್ಯಾಯಾಲಯಗಳು ಇದೇ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿವೆ.

    ಲಘು ವ್ಯವಹರಾಗಳ ನ್ಯಾಯಲಯದ ಸಂಕ್ಷಿಪ್ತ ಪರಿಚಯ

    ಸರ್ಕಾರದ, ಅಧಿಸೂಚನೆ ಸಂ.ಎಚ್‍ಡಿ-63 ಸಿಎಡಿ-64, ಬೆಂಗಳೂರು ದಿನಾಂಕ 24.06.1964ರ ರೀತ್ಯ, ಮೈಸೂರು ಲಘು ವ್ಯವಹಾರಗಳ ಕಾಯ್ದೆ 1964ರ ರೀತ್ಯ, ರಿಕ್ತವಾದ ಅಧಿಕಾರದಿಂದ ಮೈಸೂರು ರಾಜ್ಯ ಸರ್ಕಾರ 01.07.1964ರಂದು ಸದರಿ ಕಾಯ್ದೆ ಜಾರಿಗೂಳಿಸಿದ್ದು, ಸದರಿ ಆದೇಶ ರಾಜ್ಯ ಪತ್ರದಲ್ಲಿ ಪ್ರಕಟಗೊಂಡಿದ್ದು, ಸರ್ಕಾರ ತನ್ನ ಅಧಿಸೂಚನೆ ಲಾ-263 ಎಲ್‍ಸಿಇ-80, ದಿನಾಂಕ 05.11.1980ರಂತೆ, ಲಘು ವ್ಯವಹಾರಗಳ ನ್ಯಾಯಾಲಯಗಳನ್ನು ದಿನಾಂಕ 17.11.1980ರಿಂದ, ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವಂತೆ ಬೆಂಗಳೂರು ನಗರ ಸಿವಿಲ್‍ ನ್ಯಾಯಾಲಯದ ಕಟ್ಟಡದಲ್ಲಿ ಸ್ಧಾಪನೆ ಮಾಡಿರುತ್ತದೆ. ತದನಂತರ, ಅದು ನಗರ ಸಿವಿಲ್ ನ್ಯಾಯಾಲಯದಿಂದ ಬೇರ್ಪಟ್ಟು, ತನ್ನದೇ ಆಡಳಿತ ವ್ಯವಸ್ಧೆಯನ್ನು ಹೊಂದಿರುತ್ತದೆ. ಕಾರ್ಯಾರಂಭದ ಕಾಲದಲ್ಲಿ ಶ್ರೀಯುತ ಕೆ.ಎನ್. ಕೆಂಪಣ್ಣ ಹಿರಿಯ ಜಿಲ್ಲಾ ನ್ಯಾಯಾಧೀಶರನ್ನು, ಮುಖ್ಯ ನ್ಯಾಯಾಧೀಶರನ್ನಾಗಿ ಲಘು ವ್ಯವಹಾರಗಳ ನ್ಯಾಯಾಲಯಕ್ಕೆ ನೇಮಕ ಮಾಡಲಾಗಿತ್ತು, ಆರಂಭದಲ್ಲಿ 17 ಹೆಚ್ಚುವರಿ ನ್ಯಾಯಾಧೀಶರನ್ನಾಗಿ, ಹಿರಿಯ ಸಿವಿಲ್ ನ್ಯಾಯಾಧೀಶರ ಶ್ರೇಣಿಯ ನ್ಯಾಯಾಧೀಶರನ್ನು ನೇಮಕ ಮಾಡಲಾಗಿತ್ತು. ತದನಂತರ, ಹೆಚ್ಚಾದ ಮೊಕದ್ದಮೆಗಳ ಸಂಖ್ಯೆಗೆ ಅನುಗುಣವಾಗಿ ಅಪರ ನ್ಯಾಯಾಧೀಶರ ಸಂಖ್ಯೆಗಳನ್ನು ಹೆಚ್ಚಿಸಿದ್ದು, ಹಾಲಿ ಜಿಲ್ಲಾ ನ್ಯಾಯಾಧೀಶರ ಶ್ರೇಣಿಯ ಮುಖ್ಯ ನ್ಯಾಯಾಧೀಶರನ್ನೊಳಗೊಂಡಂತೆ ಒಟ್ಟು 26 ಲಘು ವ್ಯವಹಾರಗಳ ನ್ಯಾಯಾಲಯ ಕಾರ್ಯನಿರ್ವಹಿತ್ತಿದ್ದು, ನಗರ ಸಿವಿಲ್ ನ್ಯಾಯಾಲಯದ ಕಟ್ಟಡದಲ್ಲಿ 23 ಮತ್ತು ಮೆಯೋಹಾಲ್ ಘಟಕದಲ್ಲಿ 3 ನ್ಯಾಯಾಲಯಗಳು, ವಿಲೇಖನಾಧಿಕಾರಿಗಳಾಗಿ, ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶರು ಕಾರ್ಯನಿರ್ವಹಿಸುತ್ತಿದ್ದಾರೆ.